ಇದೇ ಮೊದಲ ಬಾರಿಗೆ ಕೆಜಿಗೆ 785ರೂ. ತಲುಪಿದ ರೇಷ್ಮೆ ಗೂಡಿನ ದರ..!
ಬೆಂಗಳೂರು,ನ.26- ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ಒಂದು ಕೆಜಿ 785 ರೂಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ. 300 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ರೇಷ್ಮೆ ಗೂಡಿನ ದರ ಕೊರೋನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು.
ಕೊರೋನಾ ಸಂದರ್ಭದಲ್ಲಿ ಡೀಲರ್ರ್‍ಗಳು ರೇಷ್ಮೆ ಗೂಡು ಖರೀದಿಸದ ಹಿನ್ನೆಲೆಯಲ್ಲಿ ರೇಷ್ಮೆ ದರ ಕುಸಿದಿತ್ತು. ಇವೆಲ್ಲದರ ಜೊತೆಗೆ ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯಿಂದಾಗಿ ಸೂಕ್ತ ದರ ಸಿಗದೇ ರೇಷ್ಮೆ ಬೆಳೆಗಾರರು ವಂಚನೆಗೊಳಗಾಗುತ್ತಿದ್ದರು. ಆದರೆ, ಡಾ.ನಾರಾಯಣಗೌಡ ಅವರು ರೇಷ್ಮೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡರು.
ಸಚಿವ ಡಾ.ನಾರಾಯಣ ಗೌಡ ಅವರು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರ ಹೊಲಗಳಿಗೆ ಹೋಗಿ ರೇಷ್ಮೆ ಬೆಳೆಗಾರರ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ರೇಷ್ಮೆ ಮಾರುಕಟ್ಟೆಗಳಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯ, ದಲ್ಲಾಳಿಗಳ ಕಿರುಕುಳ, ಮೋಸ ಸೇರಿದಂತೆ ತಮಗಾಗುತ್ತಿದ್ದ ಸಮಸ್ಯೆ ಬಗ್ಗೆ ರೇಷ್ಮೆ ಬೆಳೆಗಾರರು ಸಚಿವರ ಗಮನಕ್ಕೆ ತಂದಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು ರೇಷ್ಮೆ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿದ್ರು. ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳ ಕಡಿವಾಣಕ್ಕೆ ಅವರು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದರು.
ಕೆಲವು ಸಿಬ್ಬಂದಿಯ ಕುಮ್ಮಕ್ಕಿನಿಂದ ಅವ್ಯವಹಾರಗಳು ನಡೆಸುತ್ತಿದ್ದ ದಲ್ಲಾಳಿಗಳಿಗೆ ಸಚಿವರು ಎಚ್ಚರಿಕೆ ನೀಡಿ ಕಡಿವಾಣ ಹಾಕಿದ್ದರು. ರೇಷ್ಮೆ ಗೂಡು ಕಳ್ಳತನ ತಪ್ಪಿಸಲು ರೇಷ್ಮೆ ಮಾರುಕಟ್ಟೆಯಲ್ಲಿ ಸಿಸಿಟಿವಿ ಅಳವಡಿಸುವ ಕ್ರಮಕೈಗೊಂಡು, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಕ್ರಮಗಳು ನಡೆಯದಂತೆ ಕ್ರಮ ತೆಗೆದುಕೊಂಡಿದ್ದರು.
ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆಗೆ ತೆರಳುವಾಗ ಪೊಲೀಸರು ಹಾಗೂ ಹಲವರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲು ವಿಶೇಷ ಗುರುತಿನ ಚೀಟಿ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡು, ರಾಜ್ಯಾದ್ಯಂತ 1.38 ಲಕ್ಷ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಭ್ರಷ್ಟಾಚಾರ ಹಾಗೂ ಅವ್ಯವಹಾರ ತಡೆಗಟ್ಟಲು ಇ – ಪೇಮೆಂಟ್ ಜಾರಿಗೆ ತರಲಾಗಿದೆ. ರೇಷ್ಮೆ ಗೂಡು ಮಾರಾಟಕ್ಕೆ ತೊಂದರೆ ಆಗದಂತೆ ರೇಷ್ಮೆ ಮಾರುಕಟ್ಟೆಗಳನ್ನು ವಿಸ್ತರಣೆಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದರ ಜೊತೆಗೆ ರೇಷ್ಮೆ ಬೆಳೆಗಾರರ ಜೊತೆ ಅವರ ಹೊಲದಲ್ಲೇ ಸಂವಾದ ನಡೆಸುವ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಸಚಿವ ಡಾ. ನಾರಾಯಣಗೌಡ ಅವರ ಈ ಎಲ್ಲಾ ದಿಟ್ಟ ಕ್ರಮಗಳಿಂದಾಗಿ ರೇಷ್ಮೆ ಬೆಳೆಗಾರರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಕೆಜಿ ರೇಷ್ಮೆ ಗೂಡು 785 ರೂಪಾಯಿ ಮುಟ್ಟಿದೆ.
ರೇಷ್ಮೆ ಗೂಡಿನಲ್ಲಿ ಮಿಶ್ರತಳಿ, ದ್ವಿತಳಿ ಎಂಬ ಎರಡು ರೀತಿಯಿದ್ದು ರಾಮನಗರ, ಶಿಡ್ಲಘಟ್ಟದಲ್ಲಿ ದ್ವಿತಳಿ ರೇಷ್ಮೆ ಗೂಡು ಗರಿಷ್ಠ ದರ ತಲುಪಿರುವ ಮಾಹಿತಿ.
25-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 785 ರೂ.
10-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 710 ರೂ.
14-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 700 ರೂ.
15-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 725 ರೂ.
16-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 706 ರೂ.
17-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 740 ರೂ.
18-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 732 ರೂ.
20-11-2021- ಶಿಡ್ಲಘಟ್ಟ ಗರಿಷ್ಠ – ಒಂದು ಕೆಜಿಗೆ 700 ರೂ.
26-11-2021- ಶಿಡ್ಲಘಟ್ಟ ಗರಿಷ್ಠ 700 ರೂ.
ಇದರ ಜೊತೆಗೆ ರೇಷ್ಮೆ ದರ ಸರಾಸರಿ ಕಳೆದ ವರ್ಷಕ್ಕಿಂತ ಡಬಲ್ ಆಗಿದೆ. 2020-21 ನೇ ಸಾಲಿನಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿ ಇತ್ತು. ಆದರೆ, ಪ್ರಸಕ್ತ ಸಾಲು ಅಂದರೇ 2021-22 ನೇ ಸಾಲಿನಲ್ಲಿ ಪ್ರತಿ ಕೆಜಿಗೆ ಸರಾಸರಿ 500 ರೂ.ನಷ್ಟಿದೆ.
ರೇಷ್ಮೆ ಗೂಡು 785 ರೂಪಾಯಿಗೆ ಮುಟ್ಟಿರುವುದು ಸಂತಸ ತಂದಿದೆ: ಸಚಿವ ಡಾ.ನಾರಾಯಣಗೌಡ ಪ್ರತಿ ಕೆಜಿ ಗೂಡಿಗೆ 700 ರೂಪಾಯಿಗೂ ಮೆಲ್ಪಟ್ಟು ಸಿಗುತ್ತಿರುವುದು ರೇಷ್ಮೆ ಬೆಳೆಗಾರರಿಗೆ ಸಂತೋಷವನ್ನು ತಂದಿದೆ. ನಿನ್ನೆ ರಾಮನಗರ ಮಾರುಕಟ್ಟೆಯಲ್ಲಿ ಒಂದು ಕೆಜಿ ರೇಷ್ಮೆ ಗೂಡು 785 ರೂ.ಗೆ ಮಾರಾಟವಾಗಿದೆ.
ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಬೆಳೆಯಲು ಇದು ಸಹಕಾರಿಯಾಗಲಿದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿರುವ ಪರಿಣಾಮದಿಂದ ರೇಷ್ಮೆ ಗೂಡಿನ ಗುಣಮಟ್ಟಕ್ಕೆ ತಕ್ಕಂತೆ ನೈಜ ಬೆಲೆ ಸಿಗುತ್ತಿದೆ. ಇದು ಸಂತಸದ ವಿಚಾರ.
ರೇಷ್ಮೆ ಗೂಡಿನ ದರವೂ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರೇಷ್ಮೆ ಬೆಳೆಗಾರರ ಜೊತೆ ನಮ್ಮ ಸರ್ಕಾರ ಇದೆ. ರೇಷ್ಮೆ ಬೆಳೆಗಾರರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಹಾಗೂ ಗುಣಮಟಕ್ಕೆ ತಕ್ಕಂತೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇನೆ. ರೇಷ್ಮೆ ಗೂಡು ದರ 700 ರೂಪಾಯಿ ದಾಟಿರುವುದು ಮತ್ತಷ್ಟು ರೈತರು ರೇಷ್ಮೆ ಬೆಳೆಯುವುದಕ್ಕೆ ಪ್ರೇರಣೆಯಾಗಲಿದೆ ಎಂದು ಸಚಿವ ಡಾ.ನಾರಾಯಣ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.