ರಾಜ್ಯ

ಇಂದು ಸಂಜೆ ಸಿಎಂ ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ಶಾಸಕರಿಗೆ ಭೋಜನಕೂಟ: ಕುತೂಹಲ ಕೆರಳಿಸಿದ ರಾಜಕೀಯ ನಡೆ

ಬೆಂಗಳೂರು: ಆಪರೇಷನ್ ಹಸ್ತದ ಗುಸುಗುಸು ಸುದ್ದಿ ಕೇಳಿಬರುತ್ತಿರುವುದರ ಮಧ್ಯೆ ಬುಧವಾರ ಸಾಯಂಕಾಲ ತಮ್ಮ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರು ಮತ್ತು ಸಚಿವರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.

ನಿನ್ನೆ ಬೆಳಗ್ಗೆ ಶಾಸಕಾಂಗ ಸಭೆ ಏರ್ಪಡಿಸಿದ್ದ ಮುಖ್ಯಮಂತ್ರಿಗಳು ಇಂದು ಸಾಯಂಕಾಲ ಭೋಜನ ಕೂಟ ಏರ್ಪಡಿಸಿದ್ದು ಎಲ್ಲಾ ಬಿಜೆಪಿ ಶಾಸಕರುಗಳನ್ನು ಆಹ್ವಾನಿಸಿದ್ದಾರೆ. ಶಾಸಕರ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸಂಜೆ 7 ಗಂಟೆಗೆ ಔತಣಕೂಟ ಏರ್ಪಡಿಸಲಾಗಿದೆ. ಔತಣಕೂಟ ನೆಪದಲ್ಲಿ ಶಾಸಕರನ್ನು ಮುಖತಃ ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಚನೆಯಲ್ಲಿ ಸಿಎಂ ಇದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತುಗಳು ಒಂದೆಡೆ ಕೇಳಿಬರುತ್ತಿದೆ. ಶಾಸಕರ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ, ಸರ್ಕಾರದಿಂದ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ, ಪಕ್ಷದಲ್ಲಿ, ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿಯವರ ನಾಯಕತ್ವ, ಯಡಿಯೂರಪ್ಪನವರ ನಾಯಕತ್ವ ಕಡೆಗಣನೆ ಹೀಗೆ ಹತ್ತು ಹಲವು ಅಸಮಾಧಾನ, ಸಮಸ್ಯೆಗಳು ಬಿಜೆಪಿ ಶಾಸಕರನ್ನು ಕಾಡುತ್ತಿರುವಾಗ ಇಂದಿನ ಸಿಎಂ ಬೊಮ್ಮಾಯಿ ಅವರ ಭೋಜನಕೂಟ ಮಹತ್ವ ಪಡೆದಿದೆ.

Related Articles

Leave a Reply

Your email address will not be published. Required fields are marked *

Back to top button