ದೇಶ
Trending

ಇಂದು ಉಪರಾಷ್ಟ್ರಪತಿ ಚುನಾವಣೆ: ಯಾರಿಗಿದೆ ಸಂಖ್ಯಾಬಲ, ಹೇಗೆ ನಡೆಯಲಿದೆ ಮತದಾನ?

ಇಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಒಟ್ಟಾರೆಯಾಗಿ 782 ಸಂಸದರು (ಲೋಕಸಭೆ ಮತ್ತು ರಾಜ್ಯಸಭೆಯಿಂದ) ತಮ್ಮ ಮತ ಚಲಾಯಿಸುವ ಹಕ್ಕು ಹೊಂದಿದ್ದು, ಇಬ್ಬರೂ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಸಂವಿಧಾನದ 66(1) ನೇ ವಿಧಿಯ ಪ್ರಕಾರ, ಭಾರತದ ಉಪರಾಷ್ಟ್ರಪತಿಗಳನ್ನು ರಾಜ್ಯಸಭೆಯ ಚುನಾಯಿತ ಸದಸ್ಯರು, ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರು ಮತ್ತು ಲೋಕಸಭೆಯ ಚುನಾಯಿತ ಸದಸ್ಯರು ಆಯ್ಕೆ ಮಾಡಲಿದ್ದಾರೆ. ದೇಶದ ಎರಡನೇ ಅತ್ಯುನ್ನತ ಹುದ್ದೆಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಂಸತ್ ಭವನದಲ್ಲಿ ಮತದಾನ ಪ್ರಾರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ.

324 ನೇ ವಿಧಿಯ ಅಡಿ ಭಾರತದ ಚುನಾವಣಾ ಆಯೋಗವು (ECI) ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಹೊಂದಿದೆ.

ಮತದಾನ ವ್ಯವಸ್ಥೆ : ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ‘ಮಂಗಳವಾರ ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ 782 ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ’ ಎಂದು ಹೇಳಿದ್ದಾರೆ.

ಸಂಸತ್ ಭವನದ ಕೊಠಡಿ ಸಂಖ್ಯೆ ಎಫ್-101, ವಸುಧಾ, ಸಂಸತ್ ಭವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮತಪತ್ರಗಳನ್ನು ಬಳಸಿಕೊಂಡು ಮತದಾನ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ನಂತರ ಫಲಿತಾಂಶವನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಒಮ್ಮೆ ಆರು ಸದಸ್ಯರು ಮತ ಚಲಾಯಿಸಲು ಕೊಠಡಿ ಪ್ರವೇಶಿಸಬಹುದು. ಅದಕ್ಕಾಗಿ ಆರು ಕ್ಯಾಬಿನ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಅವರು ತಮ್ಮ ಮತಪತ್ರಗಳಲ್ಲಿ ಗುರುತು ಹಾಕಬಹುದು ಮತ್ತು ನಂತರ ಅದನ್ನು ಮತಪೆಟ್ಟಿಗೆಗೆ ಹಾಕಬಹುದು’ ಎಂದು ಹಿರಿಯ ಚುನಾವಣಾ ಸಮಿತಿ ಅಧಿಕಾರಿ ಹೇಳಿದ್ದಾರೆ. ಮತದಾನದ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಹಿರಿಯ ಚುನಾವಣಾ ಸಮಿತಿ ಅಧಿಕಾರಿ ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ ನಡೆಸುವ ವಿಧಾನದ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಲೋಕಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು, ‘ಈ ಮತದಾನದ ವಿಧಾನ ಸಾರ್ವತ್ರಿಕ ಚುನಾವಣೆ ನಡೆಸುವ ವಿಧಾನದಂತೆಯೇ ಇರುತ್ತದೆ. ವ್ಯತ್ಯಾಸವೆಂದರೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತದೆ. ಆದರೆ ಇಲ್ಲಿ ಮತಪತ್ರಗಳನ್ನು ಬಳಸಿಕೊಂಡು ಮತದಾನ ನಡೆಸಲಾಗುತ್ತದೆ. ಅಲ್ಲದೆ, ಇಲ್ಲಿನ ಮತದಾರರೆಲ್ಲರೂ ಉಭಯ ಸದನಗಳ ಸಂಸದರು, ಸಾರ್ವಜನಿಕರಲ್ಲ’ ಎಂದು ಹೇಳಿದ್ದಾರೆ.

‘ಸಂಸದರು ಮತದಾನ ನಡೆಯುವ ಚುನಾವಣಾಧಿಕಾರಿ (ಆರ್‌ಒ) ಬಳಿಗೆ ಹೋಗಬೇಕು. ಅವರಿಗೆ ವರ್ಣಮಾಲೆಯಂತೆ ಪಟ್ಟಿ ಮಾಡಲಾದ ಅಭ್ಯರ್ಥಿಗಳ ಹೆಸರುಗಳಿರುವ ಮತಪತ್ರಗಳನ್ನು ನೀಡಲಾಗುವುದು. ಮತಪತ್ರವನ್ನು ಅವರಿಗೆ ಹಸ್ತಾಂತರಿಸಿದಾಗ, ಮತದಾರರ ಪಟ್ಟಿಯಲ್ಲಿ ಸಂಸದರ ಹೆಸರಿನ ಮುಂದೆ ಆರ್‌ಒ ಒಂದು ಗುರುತು ಹಾಕುತ್ತಾರೆ’ ಎಂದು ಆಚಾರ್ಯ ಹೇಳಿದ್ದಾರೆ.

ಅದಾದ ನಂತರ ಸಂಸದರು ಕ್ಯಾಬಿನ್ ಒಳಗೆ ಹೋಗಿ ತಮ್ಮ ಮತವನ್ನು ಗುರುತಿಸುತ್ತಾರೆ. ಗುರುತು ಮಾಡಿದ ನಂತರ, ಅವರು ಹೊರಗೆ ಬಂದು ಮತಪತ್ರವನ್ನು ಕೋಣೆಯ ಮಧ್ಯದಲ್ಲಿ ಇಡಲಾಗುವ ಮತಪೆಟ್ಟಿಗೆಗೆ ಹಾಕಬಹುದು ಎಂದು ತಿಳಿಸಿದ್ದಾರೆ.

‘ಒಬ್ಬ ಅಭ್ಯರ್ಥಿಯ ಒಬ್ಬ ಪ್ರತಿನಿಧಿ ಮತದಾನ ಕೊಠಡಿಯಲ್ಲಿ ಆರ್‌ಒ ಜೊತೆಗೆ ಹಾಜರಿರಬಹುದು. ಅವರು ಮತದಾನ ಪ್ರಕ್ರಿಯೆಯನ್ನು ವೀಕ್ಷಿಸುತ್ತಿರುತ್ತಾರೆ. ಯಾವುದೇ ಅಕ್ರಮಗಳು ಕಂಡುಬಂದರೆ, ಅವರು ಆಕ್ಷೇಪಣೆಗಳನ್ನು ಎತ್ತುತ್ತಾರೆ ಮತ್ತು ಅದನ್ನು ಆರ್‌ಒ ಗಮನಕ್ಕೆ ತರುತ್ತಾರೆ. ಚುನಾವಣಾ ಆಯೋಗದ ವೀಕ್ಷಕರು ಸಹ ಅಲ್ಲಿರುತ್ತಾರೆ ಮತ್ತು ಅವರು ಕೂಡ ಇಡೀ ಪ್ರಕ್ರಿಯೆಯನ್ನು ವೀಕ್ಷಿಸುತ್ತಾರೆ’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಅಭ್ಯರ್ಥಿಗಳು ಮತ ಚಲಾಯಿಸಬಹುದೇ? ಅಭ್ಯರ್ಥಿಗಳು ಸಂಸದರಾಗಿದ್ದರೆ ಮಾತ್ರ ಮತ ಚಲಾಯಿಸಬಹುದು. ಅವರು ಸಂಸದರಲ್ಲದಿದ್ದರೆ, ಮತ ಚಲಾಯಿಸಲು ಸಾಧ್ಯವಿಲ್ಲ.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಅವರು ಎರಡೂ ಸದನಗಳಲ್ಲಿ ಸಂಖ್ಯಾ ಬಲದ ವಿಷಯದಲ್ಲಿ ಇಂಡಿಯಾ ಬ್ಲಾಕ್‌ನ ನಾಮನಿರ್ದೇಶಿತ ಅಭ್ಯರ್ಥಿ ರೆಡ್ಡಿ ಅವರಿಗಿಂತ ಮುಂದಿದ್ದಾರೆ. ಲೋಕಸಭೆಯಲ್ಲಿ ಎನ್‌ಡಿಎಯ ಬಲ 293 ಆಗಿದ್ದರೆ, ವಿರೋಧ ಪಕ್ಷ ಇಂಡಿಯಾ ಒಕ್ಕೂಟದ ಬಲ 234, ರಾಜ್ಯಸಭೆಯಲ್ಲಿ ಅದು ಕ್ರಮವಾಗಿ 132 ಮತ್ತು 77 ಆಗಿದೆ.

ತನ್ನ ಅಭ್ಯರ್ಥಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ, ಚುನಾವಣೆಗೂ ಮುನ್ನ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ತನ್ನ ಸಂಸದರಿಗೆ ಎರಡು ದಿನಗಳ ಕಾರ್ಯಾಗಾರ ಆರಂಭಿಸಿತ್ತು. ಮತ್ತೊಂದೆಡೆ, ಸೋಮವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಇಂಡಿಯಾ ಬ್ಲಾಕ್ ಸಂಸದರ ಸಭೆ ನಡೆದಿದ್ದು, ಇದನ್ನು ಮತದಾನಕ್ಕೆ ಒಂದು ದಿನ ಮೊದಲು ಒಗ್ಗಟ್ಟಿನ ಪ್ರದರ್ಶನವೆಂಬಂತೆ ಕಾಣಬಹುದು. ಜುಲೈನಲ್ಲಿ ಜಗದೀಪ್ ಧಂಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button