ಮಳೆಯೇ ಇರಲಿ.. ಬಿಸಿಲೇ ಇರಲಿ.. ಯಾವುದನ್ನು ಲೆಕ್ಕಿಸದೆ ಅಪ್ಪು ಸಮಾಧಿಗೆ ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಅಪ್ಪು(Appu) ನಮ್ಮನ್ನೆಲ್ಲ ಬಿಟ್ಟು ಹೋಗಿ ಇಂದಿಗೆ 11ನೇ ದಿನ . ಆದರೂ ಅವರ ಅಭಿಮಾನಿಗಳ ನೋವು(Pain) ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಪ್ರತಿದಿನ ಅಪ್ಪು ಸಮಾಧಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ(Fans)ಗಳು ಆಗಮಿಸುತ್ತಿದ್ದಾರೆ. ಇಂದು ಡಾ ರಾಜ್‌ಕುಮಾರ್ ಕುಟುಂಬದಿಂದ(Dr Rajkumar Family) ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಅವರ 11ನೇ ದಿನದ ತಿಥಿ ಕಾರ್ಯ ನಡೆಯಲಿದೆ.
ಬೆಳಗ್ಗೆ ಪುನೀತ್ ಅವರ ಮನೆಯಲ್ಲಿ ಶಾಸೊತ್ರೕಕ್ತವಾಗಿ ಪೂಜೆ ನಡೆದಿದೆ. ನಂತರ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ(Kanteerava Studios) ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಿಥಿ ಕಾರ್ಯ ಮಾಡಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನದ ವರೆಗೂ ಅಪ್ಪು ಸಮಾಧಿಗೆ ಭೇಟಿ ನೀಡಲು ಅಭಿಮಾನಿಗಳಿಗೆ ಅವಕಾಶವಿಲ್ಲ. ನಿನ್ನೆ ಭಾನುವಾರ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಅಭಿಮಾನಿಗಳು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಮಧ್ಯಾಹ್ನ 12ರವರೆಗೆ ಅಭಿಮಾನಿಗಳಿಗೆ ನೋ ಎಂಟ್ರಿ
ಅಪ್ಪು ನಿಧನದ ಬಳಿಕ ಕೆಲವು ಅಭಿಮಾನಿಗಳಿಗೆ ಬಹಳ ಬೇಸರವಾಗಿದೆ. ಇಂದು 11ನೇ ದಿನದ ಪುಣ್ಯಸ್ಮರಣೆ ಇರುವುದರಿಂದ ಫ್ಯಾನ್ಸ್ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕುಟುಂಬದವರ ಕಾರ್ಯಕ್ಕೆ ತೊಂದರೆ ಆಗಬಾರದು. ಹೀಗಾಗಿ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಿಲ್ಲ. ಎಲ್ಲ ಕಾರ್ಯಗಳು ಮುಗಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಈಗಾಗಲೇ ಅಭಿಮಾನಿಗಳು ಮುಂಜಾನೆಯಿಂದ ಆಗಮಿಸಿ, ಕ್ಯೂನಲ್ಲಿ ನಿಂತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿ ಬಳಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.