
ಬೆಂಗಳೂರು, ಏಪ್ರಿಲ್ 04: ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳದ (Price Hike) ಹಿನ್ನೆಲೆ ಕಾರು ತಯಾರಿಕಾ ಕಂಪನಿಗಳ ದರ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಇದರ ಎಫೆಕ್ಟ್ ಇದೀಗ ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಕ್ಯಾಬ್ಗಳ (cab) ಮೇಲೆ ಬಿದ್ದಿದ್ದು, ಇಂದಿನಿಂದಲೇ ಪ್ರತಿ ಕಿಮೀ ಮೇಲೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗುತ್ತಿದೆ.
2025ನೇ ವರ್ಷವನ್ನು ದರ ಏರಿಕೆಯ ವರ್ಷ ಅಂದರೆ ತಪ್ಪಾಗಲ್ಲ. ಅದರಲ್ಲೂ ದುಬಾರಿ ದುನಿಯಾನೇ ಓಪನ್ ಆದ ತಿಂಗಳು ಅಂದರೆ ಏಪ್ರಿಲ್ ಎನ್ನಬಹುದು. ಈ ತಿಂಗಳಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ವಳ, ನಾಲ್ಕು ನಾಲ್ಕು ಬೆಲೆ ಏರಿಕೆಯಿಂದ ಕಂಗಲಾಗಿರುವ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್ಗಳು ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗಿದೆ ಇಲ್ಲಾಂದ್ರೆ ನಾವು ಉದ್ಯಮ ನಡೆಸೋದು ಕಷ್ಟ ಆಗುತ್ತದೆ ಅಂತಿದ್ದಾರೆ.
ಇನ್ನೂ ಕ್ಯಾಬ್ಸ್ ಮತ್ತು ಟ್ರಾವೆಲ್ಸ್ ವಾಹನಗಳ ಕಿಮೀ ದರ ಏರಿಕೆಗೆ ಪ್ರಮುಖ ಕಾರಣ ಅಂದರೆ ಈಗಾಗಲೇ ಕೇಂದ್ರ ಸರ್ಕಾರ ಟೋಲ್ ದರವನ್ನು 5% ರಷ್ಟು ಹೆಚ್ಚಳ ಮಾಡಿದೆ. ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ 3% ರಿಂದ 4% ರಷ್ಟು ದರ ಹೆಚ್ಚಳ ಮಾಡಿದೆ. ಇತ್ತ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ಕಾರುಗಳಿಗೆ ಬರೋಬ್ಬರಿ 5% ರಷ್ಟು ಲೈಫ್ ಟೈಮ್ ಟ್ಯಾಕ್ಸ್ 1% ರಷ್ಟು ಸೆಸ್ ವಿಧಿಸಿದೆ. ಈ ಎಲ್ಲಾ ದರ ಏರಿಕೆಯಿಂದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಷನ್ ತಮ್ಮ ಕ್ಯಾಬ್ಗಳ ಕಿಮೀ ದರ ಏರಿಕೆ ಮಾಡಿದೆ.ಹತ್ತು ಲಕ್ಷ ರೂ. ಕಾರು ಖರೀದಿ ಮಾಡಿದರೆ, ಹೆಚ್ಚುವರಿಯಾಗಿ 30 ರಿಂದ 40 ಸಾವಿರ ರೂ ಪಾವತಿ ಮಾಡಬೇಕು. 20 ಲಕ್ಷ ರೂ ಕಾರು ಖರೀದಿ ಮಾಡಿದರೆ ಹೆಚ್ಚುವರಿಯಾಗಿ 60 ರಿಂದ 80 ಸಾವಿರ ರೂ. ಪಾವತಿ ಮಾಡಬೇಕು. ಹತ್ತು ಲಕ್ಷ ರೂ. ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ ರಾಜ್ಯ ಸಾರಿಗೆ ಇಲಾಖೆಗೆ ಲೈಫ್ ಟೈಮ್ ಟ್ಯಾಕ್ಸ್ ಹೆಸರಲ್ಲಿ ಹೆಚ್ಚುವರಿಯಾಗಿ 50 ರಿಂದ 60 ಸಾವಿರ ರೂ ಪಾವತಿ ಮಾಡಬೇಕು.
ಈ ಬಗ್ಗೆ ಪ್ರಯಾಣಿಕ ಧನುಷ್ ಎಂಬುವವರು ಪ್ರತಿಕ್ರಿಯಿಸಿದ್ದು, ಎಲ್ಲಾ ದರ ಏರಿಕೆ ಆಗಿದೆ ಹಾಗಾಗಿ ಕ್ಯಾಬ್ ಮತ್ತು ಟ್ರಾವೆಲ್ಸ್ ಅವರು ದರ ಏರಿಕೆ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಜನರಿಗೆ ತುಂಬಾ ಸಮಸ್ಯೆ ಆಗಲಿದೆ. ಸರ್ಕಾರ ಡಿಸೇಲ್ ದರ ಕಡಿಮೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ.
ಒಟ್ಟಿನಲ್ಲಿ ಡಿಸೇಲ್ ದರದ ಎಫೆಕ್ಟ್ ಎಲ್ಲಾ ವರ್ಗದ ಮೇಲೂ ತಟ್ಟುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ವಸ್ತುಗಳ ಮೇಲೆ ದರ ಏರಿಕೆ ಆಗಲಿದೆ ಎಂದು ಕಾದು ನೋಡಬೇಕಿದೆ.