ಆಲಮಟ್ಟಿ ಡ್ಯಾಂ ಸಂತ್ರಸ್ತರಿಗೆ ಸಲ್ಪ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ!
ಬೆಂಗಳೂರು, ಸೆ. 28: ಸರಿ ಸುಮಾರು 12 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆ ಮುಂದುವರೆಸುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಯುಕೆಪಿ 3ನೇ ಹಂತದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಹೀಗಾಗಿ ಸ್ಥಗಿತಗೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಮತ್ತು ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕುರಿತು ತೀರ್ಮಾನ ಕೈಗೊಂಡಿದ್ದು, ಆ ಮೂಲಕ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ಸಣ್ಣ ನೆಮ್ಮದಿ ತರುವಂತಹ ಸುದ್ದಿಯನ್ನು ಸರ್ಕಾರ ಕೊಟ್ಟಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೊನೆಯ ಹಂತದಲ್ಲಿರುವ ಪ್ರಕರಣಗಳಿಗೆ ಕೂಡಲೇ ಪರಿಹಾರ ಪಾವತಿಸಲು, ಪುನರ್ ವಸತಿ ಕೇಂದ್ರಗಳ ಸ್ಥಾಪನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 2500 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆ ಮೂಲಕ ಆಲ್ಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬದುಕು ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಭರವಸೆ ಕೊಟ್ಟಿದೆ.
20 ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧಾರ!
3ನೇ ಹಂತದ ಯೋಜನೆಯಲ್ಲಿ ಮುಳುಗಡೆಯಾಗುವ 20 ಗ್ರಾಮಗಳನ್ನು ಸ್ಥಳಾಂತರಿಸಲು ತೀರ್ಮಾನಿಸಿದ್ದು ಅದಕ್ಕೆ ಬೇಕಾಗುವ ಪುನರ್‌ವಸತಿ ಕೇಂದ್ರ ಹಾಗೂ ಮೂಲಸೌಕರ್ಯಕ್ಕೆ ಅಗತ್ಯವಿರುವ ಅನುದಾನವನ್ನು ಪೂರೈಸಲು ಸರ್ಕಾರ ತೀರ್ಮಾನಿಸಿರುತ್ತದೆ. 20 ಗ್ರಾಮಗಳ ಕಟ್ಟಡಗಳನ್ನು ಹಾಗೂ ಆ ಗ್ರಾಮಗಳಿಗೆ ಸಂಬಂಧಿಸಿದಂತೆ ಮುಳುಗಡೆ ಜಮೀನು ಕೂಡ ಸ್ವಾಧೀನಪಡಿಸಿಕೊಂಡು ಪ್ರಸ್ತುತ ಸಾಲಿನಲ್ಲಿ 2,500 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
!ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಅನುಕೂಲವಾಗುವಂತೆ ಕಾನೂನು ಸಲಹೆಗಾರರನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಾನೂನು ಕೋಶದಿಂದ ಬಾಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೇಮಿಸಿ ಕಾನೂನು ಕೋಶವನ್ನು ಬಲಯುತಗೊಳಿಸಲು ತೀರ್ಮಾನಿಸಲಾಯಿತು.
ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಚಾರಣೆ ಹಂತದಲ್ಲಿರುವ ಭೂಸ್ವಾಧೀನ ಮೇಲ್ಮನವಿ ಪ್ರಕರಣಗಳಲ್ಲಿ ವಾದಿಸಲು ವಿಶೇಷ ಸರ್ಕಾರಿ ವಕೀಲರನ್ನು ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.