ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ
ತುಮಕೂರು: ಅಧಿಕಾರಿಗಳ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ವಿಷ ಕುಡಿದು ಮೈಸೂರು ಜಿಲ್ಲೆ ದೊಡ್ಡ ಮಾರಗೌಡನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುಮತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇನ್ನೂ ಹಸಿಯಾಗೆ ಇದೆ. ಇದರ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ಮತ್ತೊಬ್ಬ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಸಂಭವಿಸಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯದ ಗೀತಾ(29) ಆತ್ಮಹತ್ಯೆ ಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ. ಇವರಿಗೆ ನಾಗೇಗೌಡನಪಾಳ್ಯ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದಿಂದ ಕಟ್ಟಿಗೆಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಎರಡು ತಿಂಗಳ ಹಿಂದೆ ಮುಂಬಡ್ತಿ ಸಿಕ್ಕಿತ್ತು. ಕಟ್ಟಿಗೆಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಗೀತಾ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಏಕಾಏಕಿ ಅಧಿಕಾರಿಗಳು ಹಿಂಬಡ್ತಿ ನೀಡಿದ್ದಾರೆ.
ಹಿಂಬಡ್ತಿ ನೀಡಿದ್ದಕ್ಕೆ ಮನನೊಂದ ಗೀತಾ ಆತ್ಮಹತ್ಯೆ ಯತ್ನಕ್ಕೂ 2 ದಿನ ಮೊದಲಿಂದ ಊಟ ಬಿಟ್ಟಿದ್ದರು. ಭಾನುವಾರ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಕುಟುಂಬಸ್ಥರು ಗೀತಾರ ಕುತ್ತಿಗೆಯಲ್ಲಿದ್ದ ಸೀರೆಯನ್ನು ಕತ್ತರಿಸಿ ಕೂಡಲೇ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ದಲಿತ ಮಹಿಳೆಯಾದ ನನಗೆ ಈ ರೀತಿಯ ಅನ್ಯಾಯವೆಸಗಿದ್ದಾರೆ ಎಂದು ಗೀತಾ ಮತ್ತು ಇವರ ಕುಟುಂಬಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಸಿಡಿಪಿಒ ಅನುಷಾ, ಸೂಪರ್ವೈಸರ್ ಗಂಗಭೈರಮ್ಮ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.