ಇತ್ತೀಚಿನ ಸುದ್ದಿದೇಶರಾಜ್ಯ

ಅರ್ಚಕರ ವೇತನ ವಾಪಸ್​ ಕೇಳಿದ ಸರ್ಕಾರ: ಹಿರೇಮಗಳೂರು ಕಣ್ಣನ್​​ಗೆ ನೋಟಿಸ್

ದೇಶದಾದ್ಯಂತ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅರ್ಚಕರಿಗೆ ನೀಡಿದ್ದ ವೇತನವನ್ನೇ ವಾಪಸ್ ಕೇಳಿದೆ. ಕನ್ನಡದಲ್ಲೇ ರಾಮನ ಅರ್ಚನೆ ಮಾಡುವ ಚಿಕ್ಕಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ಕೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರ ಅವರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲದೆ, ಅವರಿಗೆ ನೀಡಲಾಗುತ್ತಿರುವ ವೇತನವನ್ನೂ ತಡೆಹಿಡಿಯಲಾಗಿದೆ. 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ಕನ್ನಡದ ಪಂಡಿತ, ಅರ್ಚಕ ಹಿರೇಮಗಳೂರು ಕಣ್ಣನ್​​ ಅವರಿಗೆ ಜಿಲ್ಲಾಡಳಿತ ನೋಟಿಸ್​​ ನೀಡಿದೆ.

ಕನ್ನಡದ ಪಂಡಿತ, ಕನ್ನಡ ಪೂಜಾರಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ ಇದೀಗ ದೇವಾಲಯದ ಆದಾಯ ಕಡಿಮೆ‌ ಇದೆ ಅಂತ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ, ಈ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್​ 2ರಂದು  ತಹಶಿಲ್ದಾರ್ ಸುಮಂತ್ ನೋಟಿಸ್​ ನೀಡಿದ್ದಾರೆ.

ಒಂದೆಡೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದೆ. ಇತ್ತ ಬೆಂಗಳೂರು ಪೂರ್ವ ತಾಲ್ಲೂಕಿನ ಹಿರಂಡಗಹಳ್ಳಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟಿರುವ ಸಿದ್ದರಾಮಯ್ಯ ನಾವು ಗಾಂಧೀಜಿಯವರು ಆರಾಧಿಸಿದ ರಾಮನ ಆರಾಧಕರು ಎಂದು ಹೇಳಿದ್ದಾರೆ. ಆದರೆ, ಇದೀಗ ಸರ್ಕಾರ ರಾಮ ದೇಗುಲದ ಅರ್ಚಕರಿಗೇ ವೇತನ ವಾಪಸ್ ಕೇಳಿ ನೋಟಿಸ್ ನೀಡಿದೆ.

 ದೇವಾಲಯದಲ್ಲಿ ಕನ್ನಡದಲ್ಲೇ ಮಂತ್ರಘೋಷ

ಈ ದೇಗುಲದಲ್ಲಿ ದಿನ ನಿತ್ಯವೂ ಸೀತಾ ರಾಮ ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಘೋಷಗಳಿಂದ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಕನ್ನಡದ ಪೂಜಾರಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡದಲ್ಲಿ ಕಲ್ಯಾಣ ರಾಮನಿಗೆ ಕನ್ನಡದಲ್ಲಿ ಪೂಜೆ ಕಾರ್ಯ ನಡೆಯುತ್ತದೆ. ರಾಜ್ಯ ಹೊರ ರಾಜ್ಯದಿಂದ ಆಗಮಿಸುವ ನೂರಾರು ಭಕ್ತರು ಕಲ್ಯಾಣ ರಾಮರ ದರ್ಶನ ಪಡೆಯುತ್ತಿದ್ದಾರೆ.

ಕನ್ನಡದಲ್ಲೇ ಪೂಜಿಸುವ ಅರ್ಚಕರಿಗೇ ಸಂಕಷ್ಟ

ಒಂದಡೆ ರಾಜ್ಯ ಕಾಂಗ್ರೆಸ್ ನಾಯಕರು​ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಇತ್ತ  ಕನ್ನಡದಲ್ಲೇ ಮಂತ್ರಗಳನ್ನು ಹೇಳುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುವಂತೆ ಮಾಡಿರುವ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್​ ಅವರಿಗೆ ರಾಜ್ಯ ಕಾಂಗ್ರೆಸ್​ ಸರ್ಕಾರ ನೋಟಿಸ್​ ನೀಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button