ದೇಶ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್, ಮಿರ್ಜಾಪುರದ ಮರಳು ಬಳಕೆ

ಅಯೋಧ್ಯೆ, ಸೆಪ್ಟೆಂಬರ್ 23: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಅಡಿಪಾಯ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ. ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್‌ನ ಅಂತಿಮ ಮತ್ತು 48ನೇ ಪದರವನ್ನು ತುಂಬಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

“ದೇವಸ್ಥಾನ ಅಡಿಪಾಯದ ಮೊದಲ ಹಂತ ಪೂರ್ಣಗೊಂಡಿದೆ. ನಾವು ಕಲ್ಲುಗಳಿಂದ ಕೂಡಿದ ಇನ್ನೊಂದು ಪದರವನ್ನು ಹಾಕುತ್ತೇವೆ. ಈ ಅಡಿಪಾಯವು ಕರ್ನಾಟಕದ ಗ್ರಾನೈಟ್ ಮತ್ತು ಮಿರ್ಜಾಪುರದ ಮರಳುಗಲ್ಲಿನಿಂದ ಕೂಡಿರುತ್ತವೆ,” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. ರಾಜಸ್ಥಾನದ ಬನ್ಸಿ ಪಹಾರ್‌ಪುರ್‌ನಿಂದ ಒಂದು ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಕಲ್ಲಿನ ಚಪ್ಪಡಿಗಳು ನಿರ್ಮಾಣಕ್ಕೆ ಸಿದ್ಧವಾಗಿವೆ ಎಂದು ರೈ ತಿಳಿಸಿದರು.

ಕಳೆದ 2020ರ ಆಗಸ್ಟ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿದರು. ದೇವಸ್ಥಾನದ ನೆಲಮಹಡಿ, ಗರ್ಭಗುಡಿಯ ಸ್ಥಳ ಹಾಗೂ ರಾಮ ಲಲ್ಲಾ ವಿಗ್ರಹವನ್ನು ಇರಿಸುವ ಸ್ಥಳವು 2023ರ ಡಿಸೆಂಬರ್ ವೇಳೆಗೆ ಪ್ರಾರ್ಥನೆಗೆ ಸಿದ್ಧವಾಗಲಿದೆ.

ಯೋಜನಾ ನಿರ್ವಹಣಾ ಸಲಹೆಗಾರರಾಗಿ ಸಹಿ ಮಾಡಲಾದ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್‌ಗಳು ದೇವಾಲಯದ ಸಂಕೀರ್ಣವನ್ನು ಲಾರ್ಸನ್ ಮತ್ತು ಟೂಬ್ರೊದಿಂದ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ 900 ರಿಂದ 1,000 ಕೋಟಿ ರೂಪಾಯಿ ವೆಚ್ಚ ತಗಲುವ ನಿರೀಕ್ಷೆಯಿದ್ದು, 110 ಎಕರೆ ಭೂಮಿಯಲ್ಲಿ ಹರಡಲಿದೆ. ದೇವಾಲಯ ಸಂಕೀರ್ಣವು ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಮತ್ತು ಆರ್ಕೈವಲ್ ಕೇಂದ್ರವನ್ನು ಸಹ ಹೊಂದಿರುತ್ತದೆ.

ಅಯೋಧ್ಯೆಯ ರಾಮಜನ್ಮಭೂಮಿ ಆವರಣದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸೇರಿದ ಆರು ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಅಂತಿಮ ನೀಲನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಈ ಆರು ದೇವತೆಗಳ ದೇವಾಲಯಗಳನ್ನು ರಾಮಮಂದಿರದ ಹೊರವಲಯದಲ್ಲಿ ನಿರ್ಮಿಸಲಾಗುವುದು. ರಾಮನ ಪೂಜಿಸುವುದರೊಂದಿಗೆ ಈ ದೇವತೆಗಳನ್ನು ಪೂಜಿಸುವುದೂ ಕೂಡ ಹಿಂದೂ ಧರ್ಮದಲ್ಲಿ ಬಹಳ ಮುಖ್ಯ” ಎಂದು ಮಿಶ್ರಾ ಈ ವಾರದ ಆರಂಭದಲ್ಲಿ ಪಿಟಿಐಗೆ ತಿಳಿಸಿದರು.

ರಾಮ ಮಂದಿರಕ್ಕೆ ಸಂಬಂಧಿಸಿದ ಅಡಿಪಾಯ ಭರ್ತಿ ಕಾರ್ಯ ಪೂರ್ಣಗೊಂಡ ನಂತರ ಅಕ್ಟೋಬರ್ ಅಂತ್ಯದಿಂದ ಅಥವಾ ನವೆಂಬರ್ ಮೊದಲ ವಾರದಿಂದ ಮೇಲ್ಮನೆ ರಚನೆ ಕಾರ್ಯ ಆರಂಭವಾಗಲಿದೆ ಎಂದು ಮಿಶ್ರಾ ಹೇಳಿದ್ದಾರೆ. ಭವ್ಯ ದೇವಾಲಯದ ರಚನೆಯಲ್ಲಿ ಕಲ್ಲುಗಳನ್ನು ಸ್ಥಾಪಿಸಲು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಾಲ್ಕು ಗೋಪುರ ಕ್ರೇನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಯೋಧ್ಯ ರಾಮ ಮಂದಿರ ನಿರ್ಮಾಣದ ಸ್ಥಳದಲ್ಲಿ ಮಣ್ಣು ಅಸ್ಥಿರವಾಗಿರುವುದರಿಂದ ಗಟ್ಟಿ ಅಡಿಪಾಯವನ್ನು ಹಾಕಬೇಕಿದೆ ಎಂದು ವರದಿಗಳು ಹೇಳಿವೆ. 400 ಅಡಿ ಮತ್ತು 300 ಅಡಿವರೆಗೂ 50 ಅಡಿ ಆಳದ ಗುಂಡಿಯನ್ನು ತೆಗೆಯಲಾಯಿತು. 12 ಪದರಗಳಲ್ಲಿ ಕಟ್ಟಡ ಸಾಮಗ್ರಿ, ಸಣ್ಣ ಕಲ್ಲುಗಳು ಮತ್ತು ಬೂದಿಯಿಂದ ಸಂಕ್ಷೇಪಿಸಲಾದ ಸಿಮೆಂಟ್ ಅನ್ನು ತುಂಬಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button