ಅಪ್ಪು ಸಿನಿಮಾ ನೋಡಿ ರಕ್ಷಿತಾ ಭಾವುಕ, ಅಶ್ವಿನಿ ಪ್ರಯತ್ನಕ್ಕೆ ಮೆಚ್ಚುಗೆ

ಪುನೀತ್ ರಾಜ್ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಇಂದು ಮರು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಕ್ಷಿತಾ ಪ್ರೇಮ್ ಇಂದು ತಮ್ಮ ಪುತ್ರನೊಡನೆ ಸಿನಿಮಾ ವೀಕ್ಷಿಸಿದರು. ಆ ಬಳಿಕ ಸಿನಿಮಾದ ಬಗ್ಗೆ ಅಪ್ಪು ಬಗ್ಗೆ ಮಾತನಾಡಿದರು.ಪುನೀತ್ ರಾಜ್ಕುಮಾರ್ (Puneeth Rajkumar) ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಇಂದು (ಮಾರ್ಚ್ 14) ಬಲು ಅದ್ಧೂರಿಯಾಗಿ ಮರು ಬಿಡುಗಡೆ ಆಗಿದೆ. ವಜ್ರೇಶ್ವರಿ ಕಂಬೈನ್ಸ್ ಮತ್ತು ಪಿಆರ್ಕೆ ಪ್ರೊಡಕ್ಷನ್ ಒಟ್ಟಾಗಿ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಿದ್ದು, ಅಪ್ಪು ಅವರ ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತ ಮಾಡಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಆಗಮಿಸಿ ‘ಅಪ್ಪು’ ಸಿನಿಮಾದ ಮರು ಬಿಡುಗಡೆಯನ್ನು ವೀಕ್ಷಿಸಿದ್ದಾರೆ. ‘ಅಪ್ಪು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಕ್ಷಿತಾ, ‘ಅಪ್ಪು’ ಸಿನಿಮಾ ನೋಡಿ ಭಾವುಕರಾಗಿ ಮಾತನಾಡಿದ್ದಾರೆ.‘ನಾನು ಇದೇ ಮೊದಲ ಬಾರಿಗೆ ‘ಅಪ್ಪು’ ಸಿನಿಮಾವನ್ನು ಪೂರ್ತಿ ನೋಡಿದೆ. ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ‘ಆಶಿಖಿ’ ಇನ್ನೂ ಕೆಲವು ಎವರ್ ಗ್ರೀನ್ ಲವ್ ಸ್ಟೋರಿ ಸಿನಿಮಾಗಳ ರೀತಿಯೇ ‘ಅಪ್ಪು’ ಸಿನಿಮಾದ ಲವ್ ಸ್ಟೋರಿ ಬಹಳ ಎವರ್ ಗ್ರೀನ್. ಅಪ್ಪು ಮತ್ತು ಸುಚಿ ಅವರ ಲವ್ ಸ್ಟೋರಿ ಅದ್ಭುತವಾದುದು. ಈಗಲೂ ಸಹ ಸಿನಿಮಾ ನೋಡುತ್ತಿದ್ದಾಗ ಆ ಎರಡು ಪಾತ್ರಗಳ ಲವ್ ಸ್ಟೋರಿ ಸಖತ್ ಹಾರ್ಟ್ ಟಚಿಂಗ್ ಅನಿಸುತ್ತದೆ’ ಎಂದರು ರಕ್ಷಿತಾ.ಮೊದಲ ಸಿನಿಮಾದ ಅನುಭವದ ಬಗ್ಗೆ ಮಾತನಾಡಿದ ರಕ್ಷಿತಾ, ‘ಅಮ್ಮನವರನ್ನು ನಾನು ನೆನಪಿಸಿಕೊಳ್ಳಲೇ ಬೇಕು. ಪಾರ್ವತಮ್ಮನವರೇ ನನ್ನನ್ನು ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದು, ಅವರಿಗೆ ನಮ್ಮ ತಂದೆ ಗೌರಿಶಂಕರ್ ಮಗನಿದ್ದಂತೆ ಹಾಗಾಗಿ ಅವರ ಮಗನ ಮೊದಲ ಸಿನಿಮಾಕ್ಕೆ ನನ್ನನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದರು. ಆ ಮೂಲಕ ನನಗೆ ಮೊದಲ ಅವಕಾಶ ಕೊಟ್ಟರು, ಈಗ ಸಿನಿಮಾ ನೋಡಿದಾಗ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ’ ಎಂದಿದ್ದಾರೆ ರಕ್ಷಿತಾ.‘ಅಪ್ಪು’ ಸಿನಿಮಾ ನೋಡುವುದು ಖುಷಿಯ ವಿಚಾರ. ಸಿನಿಮಾ ನೋಡುತ್ತಾ ನೋಡುತ್ತಾ, ಅಪ್ಪು ಇವತ್ತು ನಮ್ಮೊಂದಿಗೆ ಇರಬೇಕಿತ್ತು ಅನಿಸುತ್ತದೆ. ‘ಅಪ್ಪು’ ಸಿನಿಮಾ ಆದಮೇಲೆ ನಾವು ಅದೇ ಸಿನಿಮಾ ತೆಲುಗಿನಲ್ಲಿ ‘ಈಡಿಯಟ್’ ಹೆಸರಲ್ಲಿ ಮಾಡಿದೆವು. ಆದರೆ ಅದು ಸ್ವಲ್ಪ ಮಾಡರ್ನ್ ಆಗಿತ್ತು. ನನಗೆ ‘ಅಪ್ಪು’ ಸಿನಿಮಾ ಇಷ್ಟ. ಇದರಲ್ಲಿ ಒಂದು ಇನ್ನೋಸೆನ್ಸ್ ಇದೆ. ಸಿನಿಮಾದ ಲವ್ ಸ್ಟೋರಿ ನಿಜ ಅನಿಸುತ್ತದೆ. ಎಮೋಷನ್ಸ್ ನಿಜ ಅನ್ನಿಸುತ್ತದೆ. ಇದು ಕೇವಲ ಅಪ್ಪು-ಸುಚಿ ಅವರ ಕತೆ ಅಲ್ಲ ಎಲ್ಲರ ಕತೆ ಅನಿಸುತ್ತದೆ’ ಎಂದರು.ಸಿನಿಮಾದಲ್ಲಿ ಅಪ್ಪಾಜಿ (ಡಾ ರಾಜ್ಕುಮಾರ್) ಅವರು ಹಾಡಿದ ಹಾಡುಗಳು ಕೇಳಿದರೆ ಈಗಲೂ ಎಮೋಷನಲ್ ಮಾಡಿಬಿಡುತ್ತದೆ. ಅದ್ಭುತವಾದ ಫೀಲ್ನೊಂದಿಗೆ ಹಾಡು ಹಾಡಿದ್ದಾರೆ ಅವರು. ಆ ಹಾಡು ಕೇಳಿದಾಗ ಫೀಲ್ ಆಗಿಬಿಡುತ್ತೆ. ಸಿನಿಮಾದ ಯಶಸ್ಸಂತೂ ನನಗೆ ಕನಸು ನನಸಾದಂತೆ ಇತ್ತು. ಅಪ್ಪಾಜಿ ಮತ್ತು ಶಿವಣ್ಣನಿಂದ ಅವಾರ್ಡ್ ತೆಗೆದುಕೊಂಡಿದ್ದೆ, ಅದಂತೂ ಕನಸು ನನಸಾದ ಸಂದರ್ಭ, ‘ಅಪ್ಪು’ ಸಿನಿಮಾ ಒಂದು ವರ್ಷ ಓಡಿತ್ತು. ನೆನಪಿಸಿಕೊಂಡರೆ ಎಲ್ಲವೂ ಇತ್ತೀಚೆಗೆ ನಡೆದಿದೆ ಅನಿಸುತ್ತದೆ. ಅಪ್ಪು ಈಗ ನಮ್ಮೊಂದಿಗೆ ಇರಬೇಕಿತ್ತು’ ಎಂದಿದ್ದಾರೆ ರಕ್ಷಿತಾ.ಮಾತು ಮುಂದುವರೆಸಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ರಕ್ಷಿತಾ, ಇಂದು ಅಶ್ವಿನಿ ಅವರ ಹುಟ್ಟುಹಬ್ಬ, ಅವರಿಗೆ ಶುಭವಾಗಲಿ. ಒಳ್ಳೆಯ ಸ್ಪಿರಿಟ್ ಅಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಮತ್ತು ಪಿಆರ್ಕೆ ಪ್ರೊಡಕ್ಷನ್ಸ್ ಸೇರಿಕೊಂಡು ಸಿನಿಮಾ ಬಿಡುಗಡೆ ಮಾಡಿದ್ದಾರೆ. ಎಲ್ಲರೂ ಸಿನಿಮಾಕ್ಕೆ ಬೆಂಬಲ ನೀಡುತ್ತಿರುವುದು ಖುಷಿಯ ವಿಚಾರ’ ಎಂದರು.