ಬೆಂಗಳೂರು: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಪ್ರಯುಕ್ತ ದೇಶಾದ್ಯಂತ 5 ಕೋಟಿ ಹಿಂದೂಗಳ ಮನೆಗೆ ಮಂತ್ರಾಕ್ಷತೆ ಹಂಚಲಾಗುತ್ತಿದೆ. ಇದೀಗ ಈ ಮಂತ್ರಾಕ್ಷತೆ ಕುರಿತಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯನ್ನು ಬಳಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತಿದ್ದಾರೆ ಅಂತ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಡಿಕೆಶಿ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್. ಅಶೋಕ್ , ಅಯೋಧ್ಯೆಗೆ ಕಳಿಸುವ ಅಕ್ಕಿ ಎಲ್ಲಾ ಸೇರಿ ಅಕ್ಷತೆ ಮಾಡಿರೋದು. ಡಿಕೆಶಿಗೆ ಜ್ಞಾನ ಇದೆಯಾ ಅಂತ ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ನಮ್ಮನ್ನ ಕರೆದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳನ್ನು ಸಹ ಕರೆದಿಲ್ಲ. ನಾನು ಶಿವ ಭಕ್ತ, ಆಂಜನೇಯನ ಮೂರ್ತಿ ಇಲ್ಲಿದೆ ನೋಡಿ. ಎಲ್ಲಾ ದೇವರುಗಳು ನನ್ನ ಹೃದಯದಲ್ಲಿದೆ ಅಂತ ಡಿಕೆಶಿ ಹೇಳಿದ್ದ
ಅನ್ನಭಾಗ್ಯದ ಅಕ್ಕಿಯಿಂದಲೇ ಮಂತ್ರಾಕ್ಷತೆ
ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ ಸಂತೋಷ ಅಂತ ಡಿಕೆ ಶಿವಕುಮಾರ್ ಹೇಳಿದ್ದರು. ಇನ್ನು ಡಿಕೆಶಿ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 ಕೆಜಿ ಕೊಡ್ತೀನಿ ಅಂದಿರೋ ಅಕ್ಕಿ ಎಲ್ಲಿ?
ಡಿಕೆಶಿಗೆ ಜ್ಞಾನ ಇದ್ಯಾ? ಅಂತ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡ್ತೀನಿ ಅಂದ್ರು,ಆದರೆ ಈಗ 5 ಕೆಜಿ ಅಕ್ಕಿನೂ ಕೊಡ್ತಿಲ್ಲ. ಅನ್ನಭಾಗ್ಯ ಅಕ್ಕಿ ಹೋಯ್ತು.. ಈಗ ಕೇಂದ್ರ ಸರ್ಕಾರ ಮೋದಿ ಅವರು ಕೊಡ್ತಿರೋ ಅಕ್ಕಿ ಅಂತ ಅಶೋಕ್ ಹೇಳಿದ್ದಾರೆ.
ದಾನ ಕೊಟ್ಟ ಅಕ್ಕಿಯಿಂದಲೇ ಮಂತ್ರಾಕ್ಷತೆ ಮಾಡಿದ್ದಾರೆ
ಆ ಅಕ್ಕಿ ತೆಗೆದುಕೊಂಡು ಯಾರೂ ಅಕ್ಷತೆ ಮಾಡಲ್ಲ. ದೇಗುಲಗಳಿಗೆ ದಿನನಿತ್ಯ ಅಕ್ಕಿ, ಬೆಲ್ಲ ದಾನ ಮಾಡ್ತಾರೆ. ಅಯೋಧ್ಯೆಗೆ ಕಳಿಸುವ ಅಕ್ಕಿ ಎಲ್ಲಾ ಸೇರಿ ಅಕ್ಷತೆ ಮಾಡಿರೋದು ಅಂತ ಡಿಕೆಶಿ ಆರೋಪಕ್ಕೆ ಆರ್ ಅಶೋಕ್ ತಿರುಗೇಟು ಕೊಟ್ರು.
ಮುಸ್ಲಿಮರು ಕೂಡ ರಾಮಭಜನೆ ಮಾಡ್ತಿದ್ದಾರೆ
ಮುಸ್ಲಿಮರು ಕೂಡ ಇವತ್ತು ರಾಮ ಭಜನೆ ಮಾಡ್ತಿದ್ದಾರೆ. ಆದರೆ ಈ ಕಾಂಗ್ರೆಸ್‌ನವರಿಗೆ ಯಾಕೆ ದುರ್ಬುದ್ದಿ? ಅಂತ ಅಶೋಕ್ ಪ್ರಶ್ನಿಸಿದ್ರು. ಡಿಕೆಶಿ ಪೂಜೆ ಮಾಡ್ತೀನಿ ಅಂದ್ರೂ ಯಾರೂ ನಂಬಲ್ಲ. ಶೋಗೆ ಫೋಟೊ ಹಾಕೊಂಡ್ರೆ ಯಾರೂ ನಂಬಲ್ಲ ಅಂತ ಅಶೋಕ್ ವ್ಯಂಗ್ಯವಾಡಿದ್ರು.
ಕಾಂಗ್ರೆಸ್ ನಾಯಕರಿಗೆ ಅಶೋಕ್ ಸವಾಲು
ಡಿಕೆಶಿ ಅವರು ಹಿಂದೂ ದೇಶ ಆದ್ರೆ ಒಳ್ಳೆಯದು ಅಂತಾರೆ. ಸಿದ್ದರಾಮಯ್ಯ ಅವರ ಪುತ್ರ ಹಿಂದೂ ರಾಷ್ಟ್ರ ಬೇಡ ಅಂತಾರೆ. ಕಾಂಗ್ರೆಸ್‌ನವರು ಮೊದಲು ಹಿಂದೂ ರಾಷ್ಟ್ರ ಬೇಕಾ ಬೇಡ್ವಾ ಅಂತ ತೀರ್ಮಾನ ಮಾಡಿಕೊಳ್ಳಲಿ ಅಂತ ಅಶೋಕ್ ಸವಾಲು ಹಾಕಿದ್ರು.