ಅಧಿಕಾರಿಗಳ ವಿರುದ್ಧ ಟೀಕೆ: ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾಭಾರತಿ
ಭೋಪಾಲ್: ‘ಸರ್ಕಾರಿ ಅಧಿಕಾರಿಗಳು ನಮ್ಮ(ನಾಯಕರ) ಚಪ್ಪಲಿ ಎತ್ತಲಿಕಷ್ಟೇ ಇರೋದು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ, ‘ನನ್ನ ಮಾತುಗಳಿಂದ ನನಗೆ ನೋವಾಗಿದೆ. ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳ ವಿರುದ್ಧ ಉಮಾಭಾರತಿ ಅವರು ಈಚೆಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕಾಂಗ್ರೆಸ್ ನಾಯಕ ದ್ವಿಗ್ವಿಜಯ್ ಸಿಂಗ್ ಈ ವಿಷಯವಾಗಿ ಉಮಾಭಾರತಿ ವಿರುದ್ಧ ಹರಿಹಾಯ್ದಿದ್ದರು.
ಕಡಿಮೆ ಮಾತನಾಡುವಂತೆ ಉಮಾಭಾರತಿ ಅವರಿಗೆ ಕಿವಿಮಾತು ಹೇಳಿದ್ದ ಅವರು, ಅಧಿಕಾರಿಗಳ ವಿರುದ್ಧ ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕೆಂದೂ ಒತ್ತಾಯಿಸಿದ್ದರು.
ಈ ಕುರಿತು ಉಮಾಭಾರತಿಯವರು ದಿಗ್ವಿಜಯ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ‘ನನ್ನ ಮಾತಿನಿಂದ ನನಗೇ ನೋವಾಗಿದೆ. ನಾನು ಯಾವಾಗಲೂ ನಿಮಗೆ ಕಡಿಮೆ ಮಾತನಾಡಿ. ನೀವು ಹದವಾದ ಭಾಷೆ ಬಳಸುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಈಗ ನಾನೇ ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ. ನೀವು ಹಾಗೇ ಮಾಡಿ’ ಎಂದು ತಿಳಿಸಿದ್ದಾರೆ. ಪತ್ರದಲ್ಲಿ ಅವರು ‘ರಾಮಾಯಣ’ದ ಶ್ಲೋಕಗಳನ್ನು ಉಲ್ಲೇಖಿಸಿದ್ದಾರೆ.